ಕಂಠೀರವ ನರಸರಾಜ II : 1704-13. ಮೈಸೂರಿನ ದೊರೆ. ಚಿಕ್ಕದೇವರಾಜನ ಮಗ. ಜನ್ಮತಃ ಕಿವುಡ, ಮೂಗ, ಆದ್ದರಿಂದ ಮೂಕರಸು ಎಂದೇ ಈತನನ್ನು ಕರೆಯುತ್ತಿದ್ದರು. ಆದರೂ ಅಮಾತ್ಯ ತಿರುಮಲೈಯಂಗಾರ್ಯನ ಪ್ರಭಾವದಿಂದ ಈತ ಸಿಂಹಾಸನವನ್ನೇರಿದ. ಇವನ ಕಾಲದಲ್ಲಿ ದಳವಾಯಿ ಕಂಠೀರವನೆಂಬವನು ಚಿಕ್ಕಬಳ್ಳಾಪುರವನ್ನು ಮುತ್ತಿ ಅದನ್ನು ಮಣಿಸಲು ಯತ್ನಿಸಿ ಆ ಪ್ರಯತ್ನದಲ್ಲಿ ಪ್ರಾಣ ತೆತ್ತ. ಅನಂತರ ಅವನ ಮಗ ಬಸವರಾಜ ಆ ಮುತ್ತಿಗೆಯನ್ನು ಮುಂದುವರಿಸಿ, ಅದನ್ನು ಬಗ್ಗಿಸಿ ಕಪ್ಪ ವಸೂಲು ಮಾಡಿದನೆಂದು ಹೇಳಲಾಗಿದೆ. ಬೆಂಗಳೂರು ಕೋಟೆಯ ಬಳಿಯಲ್ಲಿ ಚಿಕ್ಕದೇವರಾಜ ಕಟ್ಟಿಸಿದ ವೆಂಕಟೇಶ್ವರ ದೇವಾಲಯಕ್ಕೆ ಕಂಠೀರವ ನರಸರಾಜ ಭೂಮಿಯ ದತ್ತಿ ಕೊಟ್ಟನೆಂದು ತಿಳಿಸುವ 1705ರ ಒಂದು ಶಾಸನವಿದೆ. ಈತನ ತರುವಾಯ ಇವನ ತಮ್ಮ ದೊಡ್ಡ ಕೃಷ್ಣರಾಜ (ಒಂದನೆಯ ಕೃಷ್ಣರಾಜ) ಪಟ್ಟಕ್ಕೆ ಬಂದ.	(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ